ನಾಡು, ಇತಿಹಾಸ ಮತ್ತು ಪ್ರಮುಖ ವ್ಯಕ್ತಿಗಳು
ಚಿತ್ರದುರ್ಗದ ಪಾಳೆಯಗಾರರು

ಚಿತ್ರದುರ್ಗವು ಮಧ್ಯ ಕರ್ನಾಟಕದಲ್ಲಿದೆ. ಈಗ ಅದು ಜಿಲ್ಲೆಯ ಮುಖ್ಯ ಸ್ಥಳ. ಅದಕ್ಕೆ ತನ್ನದೇ ಆದ ರೋಚಕ ಇತಿಹಾಸವಿದೆ. ಹದಿನಾರರಿಂದ ಹದಿನೆಂಟನೆಯ ಶತಮಾನಗಳ ಮಧ್ಯಂತರದಲ್ಲಿ, ಅದು ಚಿತ್ರದುರ್ಗದ ಪಾಳೆಯಗಾರರ ವಂಶದ ರಾಜಧಾನಿಯಾಗಿತ್ತು. ಈ ರಾಜವಂಶವನ್ನು, ಮತ್ತಿ ತಿಮ್ಮಣ್ಣ ನಾಯಕನು ಸ್ಥಾಪಿಸಿದನು.(1568-88) ಅವನದು ಬೇಡರ ಸಮುದಾಯಕ್ಕೆ ಸೇರಿದ ಕಾಮಗೇತಿ ವಂಶ. ತಿಮ್ಮಣ್ಣ ನಾಯಕನು ಹೊಳಲ್ಕೆರೆ, ಚಿತ್ರದುರ್ಗ ಮತ್ತು ಹಿರಿಯೂರು ಪ್ರದೇಶಗಳ ಒಡೆಯನಾಗಿದ್ದನು. ಅವನ ಪರಾಕ್ರಮವನ್ನು ಮೆಚ್ಚಿಕೊಂಡ ವಿಜಯನಗರ ಸಾಮ್ರಾಜ್ಯದ ಅರಸರು, ಆ ಪಾಳೆಯಪಟ್ಟನ್ನು ತಮ್ಮ ಆಶ್ರಯಕ್ಕೆ ತೆಗೆದುಕೊಂಡರು. ಅವನ ನಂತರ ಪಟ್ಟಕ್ಕೆ ಬಂದ ಓಬಣ್ಣ ನಾಯಕನು(1588-1602) ಚಿತ್ರದುರ್ಗದ ಕೋಟೆಯೊಳಗಡೆ, ಒಂದು ಪಟ್ಟಣವನ್ನು ನಿರ್ಮಿಸಿದನು. ಅವನ ವಾರಸುದಾರನಾದ ಕಸ್ತೂರಿರಂಗನಾಯಕನು(1602-1652) ಮಾಯಕೊಂಡ, ಅಣಜಿ, ಸಂತೆಬೆನ್ನೂರು ಮುಂತಾದ ಪ್ರದೇಶಗಳನ್ನು ವಶಪಡಿಸಿಕೊಂಡು ಪಾಳೆಯಪಟ್ಟನ್ನು ವಿಸ್ತರಿಸಿದನು. ಸಮರ್ಥ ಆಡಳಿತಗಾರನೂ ವೀರನೂ ಆದ ಇಮ್ಮಡಿ ಮದಕರಿ ನಾಯಕನು(1652-74) ರಾಜ್ಯವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿದನು. ಪ್ರತಿಯೊಂದು ವಿಭಾಗಕ್ಕೂ ಪ್ರತ್ಯೇಕ ಆಡಳಿತಗಾರನನ್ನು ನೇಮಿಸಿದನು. ದುರದೃಷ್ಟವಶಾತ್, ಈ ಕ್ರಮದ ಪರಿಣಾಮವಾಗಿ ಒಳಜಗಳಗಳು ಹೆಚ್ಚಾದವು. ಪಾಳೆಯಗಾರರಿಗೂ ಈ ಪ್ರಾದೇಶಿಕ ಅಧಿಕಾರಿಗಳಿಗೂ ನಡುವೆ ಯುದ್ಧಗಳೂ ನಡೆಯುತ್ತಿದ್ದವು.

 

ಈ ಮನೆತನಕ್ಕೆ, ಸೇಡು-ಪ್ರತಿಸೇಡು, ರಕ್ತಪಾತಗಳ ಸುದೀರ್ಘ ಇತಿಹಾಸವೇ ಇದೆ. ಈ ಸನ್ನಿವೇಶವು ಚಿಕ್ಕಣ್ಣನಾಯಕ, ಲಿಂಗಣ್ಣನಾಯಕ, ಭರಮಣ್ಣನಾಯಕ ಮತ್ತು ದೊಣ್ಣೆ ರಂಗಣ್ಣನಾಯಕರ ಕಾಲದಲ್ಲಿ ಬಹಳ ತೀವ್ರವಾಯಿತು. ದಳವಾಯಿ ಮುದ್ದಣ್ಣ ಮತ್ತು ಅವನ ಸೋದರರು ಖಳನಾಯಕರ ಪಾತ್ರವನ್ನು ವಹಿಸಿದರು. ಅವರನ್ನು ಸೋಲಿಸಿ ಪಟ್ಟಕ್ಕೆ ಬಂದ ಭರಮಣ್ಣನಾಯಕ ಮತ್ತು ದೊಡ್ಡ ಮದಕರಿನಾಯಕರ ಕಾಲದಲ್ಲಿ ಸ್ವಲ್ಪ ಮಟ್ಟಿನ ಶಾಂತಿ ಹಾಗೂ ಸಮೃದ್ಧಿಗಳನ್ನು ಪಡೆಯುವುದು ಸಾಧ್ಯವಾಯಿತು. ಅದು, ರಾಜ್ಯದ ವಿಸ್ತರಣೆಯ ಕಾಲವೂ ಆಯಿತು. ಕಿರಿಯ ಮದಕರಿನಾಯಕನ ಕಾಲದಲ್ಲಿ(1754-79) ಚಿತ್ರದುರ್ಗವು ಬಹಳ ಪ್ರಭಾವಶಾಲಿಯಾದ ರಾಜ್ಯವಾಗಿ ಬೆಳೆಯಿತು. ಅಧಿಕಾರಕ್ಕಾಗಿ ಸ್ಪರ್ಧಿಸುತ್ತಿದ್ದ ಹೈದರ್ ಆಲಿ ಮತ್ತು ಮರಾಠರಿಬ್ಬರೂ ಕಿರಿಯ ಮದಕರಿನಾಯಕನ ನೆರವನ್ನು ಬಯಸುತ್ತಿದ್ದರು. ಮೊದಲು ಹೈದರ್ ಆಲಿಯ ಪರವಾಗಿಯೇ ಇದ್ದ ಮದಕರಿನಾಯಕನು ಅವನಿಗೆ ಬಹಳ ನೆರವು ನೀಡಿದನು. ಅದರಲ್ಲಿಯೂ ನಿಡಗಲ್ಲನ್ನು ಗೆಲ್ಲುವ ಕಾರ್ಯದಲ್ಲಿ, ಅವನ ಸಹಾಯ ಮುಖ್ಯವಾಗಿತ್ತು. ಆದರೂ ಒಳಗೊಳಗೇ ಅವರಿಬ್ಬರ ನಡುವೆ, ಅತೃಪ್ತಿ ಹಾಗೂ ಅಸಮಾಧಾನಗಳ ಹೊಗೆಯಾಡುತ್ತಿತ್ತು. ಆದ್ದರಿಂದಲೇ, ಮರಾಠರು ಮತ್ತು ಹೈದರಾಬಾದಿನ ನಿಜಾಮರು ಒಂದಾಗಿ, ಹೈದರ್ ಆಲಿಯ ಮೇಲೆ ಆಕ್ರಮಣ ಮಾಡಿದಾಗ ಮದಕರಿನಾಯಕನು ಮೌನವಹಿಸಿದನು. ಇದರಿಂದ ಕುಪಿತನಾದ ಹೈದರ್ಆಲಿಯು ದೊಡ್ಡ ಸೈನ್ಯದ ಸಂಗಡ ಚಿತ್ರದುರ್ಗದ ಕೋಟೆಗೆ ಮುತ್ತಿಗೆ ಹಾಕಿದನು. ಸುದೀರ್ಘವಾದ ಯುದ್ಧದ ನಂತರ ಮದಕರಿನಾಯಕನು ಸೋಲನ್ನು ಒಪ್ಪಬೇಕಾಯಿತು. ಅವನು ಸೆರೆಯಾಳಾಗಿ, ದೂರದ ಶ್ರೀರಂಗಪಟ್ಟಣದಲ್ಲಿ ಸಾಯುವುದರೊಂದಿಗೆ ಪಾಳೆಯಗಾರರ ವಂಶದ ಇತಿಹಾಸವು ಕೊನೆಯಾಯಿತು.

 

ಚಿತ್ರದುರ್ಗದ ರಕ್ತರಂಜಿತವೂ ರೋಮಾಂಚಕವೂ ಆದ ಚರಿತ್ರೆಯೂ ಚರಿತ್ರಕಾರರನ್ನೂ ಸಾಹಿತಿಗಳನ್ನೂ ಬಹುವಾಗಿ ಆಕರ್ಷಿಸಿದೆ. ಅವರು ಈ ವಂಶದ ಆಳ್ವಿಕೆಯ ಬೇರೆ ಬೇರೆ ಹಂತಗಳ ಬಗ್ಗೆ ವಿವರವಾಗಿ ಬರೆದಿದ್ದಾರೆ. ಹುಲ್ಲೂರು ಶ್ರೀನಿವಾಸ ಜೋಯಿಸರು ಈ ರಾಜವಂಶದ ಇತಿಹಾಸವನ್ನು ಕುರಿತು ವ್ಯಾಪಕವಾದ ಸಂಶೋಧನೆ ನಡೆಸಿದರು. ಎಂ.ಎಸ್. ಪುಟ್ಟಣ್ಣನವರು ಚಿತ್ರದುರ್ಗದ ರಾಜವಂಶದ ಏಳುಬೀಳುಗಳನ್ನು ಕುರಿತು ‘ಚಿತ್ರದುರ್ಗದ ಪಾಳೆಯಗಾರರು’ ಎಂಬ ಮಹತ್ವದ ಪುಸ್ತಕವನ್ನು ಬರೆದಿದ್ದಾರೆ. ಪ್ರಸಿದ್ಧ ಕಾದಂಬರಿಕಾರರಾದ ತ.ರಾ.ಸು. ಅವರು ‘ಕಂಬನಿಯ ಕುಯಿಲು’, ‘ರಕ್ತರಾತ್ರಿ’, ‘ತಿರುಗುಬಾಣ’, ‘ಹೊಸಹಗಲು’ ಮತ್ತು ‘ವಿಜಯೋತ್ಸವ’ ಎಂಬ ಕಾದಂಬರಿಗಳ ಸರಣಿಯಲ್ಲಿ, ಪಾಳೆಯಗಾರರು ಮತ್ತು ಅವರ ದಳವಾಯಿಗಳ ನಡುವಿನ ಸಂಘರ್ಷವನ್ನು ಬಹಳ ರೊಮ್ಯಾಂಟಿಕ್ ಆದರೂ ಶಕ್ತಿಶಾಲಿಯಾದ ಶೈಲಿಯಲ್ಲಿ ಚಿತ್ರಿಸಿದ್ದಾರೆ. ಹಾಗೆಯೇ, ಆವರಿಗೆ ಅಕಾಡೆಮಿ ಪ್ರಶಸ್ತಿಯನ್ನು ತಂದುಕೊಟ್ಟ ‘ದುರ್ಗಾಸ್ತಮಾನ’ ಕಿರಿಯ ಮದಕರಿನಾಯಕನ ಅಭಿವೃದ್ಧಿ ಮತ್ತು ದುರಂತಗಳನ್ನು ಕಟ್ಟಿಕೊಡುವ ಕಾದಂಬರಿ.

 

ಹೀಗೆ ಚಿತ್ರದುರ್ಗದ ಇತಿಹಾಸವು ಕೇವಲ ತನ್ನ ಕಥೆಯನ್ನು ಮಾತ್ರವಲ್ಲ, ಮಧ್ಯಕಾಲೀನ ಕರ್ನಾಟಕದ ಹತ್ತು ಹಲವು ಪಾಳೆಯಪಟ್ಟುಗಳ ಕಥೆಯನ್ನು ಪ್ರತಿಫಲಿಸುತ್ತದೆ.

 

ಮುಂದಿನ ಓದು ಮತ್ತು ಲಿಂಕುಗಳು:

    1. Inscriptions in the Chitaldroog District, Rice B.L., 1903, Epigraphia Carnatica, Vol 11, Mysore Government Central Press, Bangalore.
    2. ಚಿತ್ರದುರ್ಗದ ಪಾಳೆಯಗಾರರು, ಎಂ.ಎಸ್. ಪುಟ್ಟಣ್ಣ, 1924, ಬೆಂಗಳೂರು
    3. The Conquest of Citradurga by Hyder Ali, Saletore R.N., 1940, Quarterly Lournal of Mythic Society, Vol 29: 171-188
    4. The Poligars of Mysore and their Civilzation, Ramachandra Rao P.B., 1943, Teppakulam: Palaniyappa Bros.
    5. ಕರ್ನಾಟಕದ ಕೋಟೆಗಳು, ಸಿ.ಎಸ್. ಪಾಟೀಲ್, ಕನ್ನಡ ವಿಶ್ವವಿದ್ಯಾಲಯ, ಹಂಪಿ.
    6. Barry Lewis - Chitradurga History
    7. Glorious history of Chitradurga Paleyagar Family
    8. Me and My Camera Obscura: Chitradurga - Day 2

ಮುಖಪುಟ / ನಾಡು, ಇತಿಹಾಸ ಮತ್ತು ಪ್ರಮುಖ ವ್ಯಕ್ತಿಗಳು